ಬಾಬೂಜಿ: ಬಂಡಾಯ, ಉಪಾಯ

ಮೊನ್ನೆ ತುಮಕೂರಿನ ಗೆಳೆಯರು ಬಾಬೂ ಜಗಜೀವನರಾಮ್ ಹುಟ್ಟುಹಬ್ಬದ ದಿನ (೫ ಏಪ್ರಿಲ್) ಮಾತಾಡಲು ಕೇಳಿದಾಗ, ಕೆಲವು ವರ್ಷಗಳ ಕೆಳಗೆ ಒಂದು ಗ್ರೂಪ್ ಫೋಟೋದಲ್ಲಿ ಕಂಡ ಬಾಬೂಜಿಯ ಮುಖಭಾವ ನೆನಪಾಯಿತು. ಆ ಫೋಟೋ ಕೆಳಗಿದೆ: 

ಈ ಫೋಟೋದಲ್ಲಿ ಜಗಜೀವನರಾಮರ ಮುಖದಲ್ಲಿ ಅವರ ಎಲ್ಲ ಸಂಕೋಚ, ಅವರು ಪ್ರತಿನಿಧಿಸುತ್ತಿದ್ದ ದಮನಿತ ಸಮುದಾಯದ ಆ ಕಾಲದ ಮನಸ್ಥಿತಿ, ಮೇಲುಜಾತಿಯ ನಾಯಕರ ನಡುವೆ ಅವರ ಹಿಂಜರಿಕೆ ಒಡೆದು ಕಾಣುತ್ತಿವೆಯೆಂದು ಅವತ್ತು ಅನ್ನಿಸಿತ್ತು; ಮತ್ತೊಬ್ಬ ಗೆಳೆಯರಿಗೂ ಹಾಗೇ ಅನ್ನಿಸಿತ್ತು. 

ಮತ್ತೊಂದು ವಿವರ: ಪ್ರಾಯಶಃ ಈ ಫೋಟೋ ತೆಗೆಯುವುದಕ್ಕಿಂತ ಮುಂಚೆ ೧೯೪೭ರಲ್ಲಿ ಗಾಂಧೀಜಿ ಹಾಗೂ ಇತರರು ತಯಾರಿಸಿದ್ದ ಪ್ರಥಮ ರಾಷ್ಟ್ರೀಯ ಮಂತ್ರಿಮಂಡಲದ ಪಟ್ಟಿಯಲ್ಲಿ ಅಂಬೇಡ್ಕರ್‍, ಜಗಜೀವನರಾಮ್ ಇಬ್ಬರ ಹೆಸರೂ ಇತ್ತು. ಅನಂತರ ಜಗಜೀವನರಾಂ ನೆಹರೂ, ಇಂದಿರಾ ಸಂಪುಟಗಳಲ್ಲಿ ಹಾಗು ಇತರ ಸಂಪುಟಗಳಲ್ಲೂ ಹಲವು ಖಾತೆಗಳ ಸಚಿವರಾಗಿದ್ದರು. ಉಪಪ್ರಧಾನಿಯೂ ಆದರು. ಜನ ಅವರನ್ನು ಪ್ರೀತಿಯಿಂದ ಬಾಬೂಜಿ ಎನ್ನುತ್ತಿದ್ದರು.  

ಮೇಲೆ ಕೊಟ್ಟಿರುವ ಫೋಟೋದ ಮುಖಭಾವಕ್ಕೆ ಮತ್ತೆ ಮರಳುವೆ. ಈ ಕಾಲದಲ್ಲಿ ಫೋಟೋ, ಪೋಸ್ಟರ್‍ ಮುಂತಾದ ದಾಖಲೆಗಳನ್ನು ಸಾಂಸ್ಕೃತಿಕ ಅಧ್ಯಯನ ಮಾಡುವ ಸಂಶೋಧಕ, ಸಂಶೋಧಕಿಯರು ಬಳಸುತ್ತಾರೆ. ಆದರೆ, ಮೇಲೆ ಕೊಟ್ಟಿರುವ ಜಗಜೀವನರಾಮರ ಫೋಟೋವನ್ನೇ ಆಧರಿಸಿ ಅವರನ್ನು ಗ್ರಹಿಸಿದರೆ ಅವರ ಸಂಕೀರ್ಣ ವ್ಯಕ್ತಿತ್ವ ಅರ್ಥವಾಗಲಾರದು.  

ಬಿಹಾರದ ಚಾಂದ್ವಾದ ಚಮ್ಮಾರಹಟ್ಟಿಯಲ್ಲಿ ಹುಟ್ಟಿದ ಜಗಜೀವನರಾಮ್ (೧೯೦೮-೧೯೮೬) ಬಾಲ್ಯ ಜಾಣ ಹುಡುಗನೊಬ್ಬನ ಬಡತನ, ಬಂಡಾಯಗಳ ಬಾಲ್ಯವಾಗಿತ್ತು. ಬಾಲಕ ಭೀಮರಾವ್ ಅಂಬೇಡ್ಕರ್‍ ಥರ ಜಗಜೀವನರಾಂ ಕೂಡ ಶಾಲೆಯಲ್ಲಿ ನೀರು ಕುಡಿಯಲು ಹೋದಾಗ ಅಸ್ಪೃಶ್ಯತೆ ಎದುರಿಸಬೇಕಾಯಿತು: ಆ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ‘ಹಿಂದೂ’, ‘ಮುಸ್ಲಿಂ’ ನೀರಿನ ಹೂಜಿಗಳಿದ್ದವು. ರಾಮ್ ‘ಹಿಂದೂ’ ಹೂಜಿಯಲ್ಲಿ ನೀರು ಕುಡಿದ. ಪ್ರಿನ್ಸಿಪಾಲರಿಗೆ ದೂರುಹೋಯಿತು. ಪ್ರಿನ್ಸಿಪಾಲರು ದಲಿತ ಮಕ್ಕಳಿಗೆ ಮೂರನೇ ಹೂಜಿ ಇರಿಸಿದರು. ಸಿಟ್ಟಿಗೆದ್ದ ರಾಮ್ ಹೂಜಿ ಒಡೆದು ಹಾಕಿದ. ಮತ್ತೊಂದು ಹೂಜಿಗೂ ಅದೇ ಗತಿಯಾಯಿತು! ಕೊನೆಗೆ ಶಾಲೆಯವರೇ ಪ್ರತ್ಯೇಕ ಹೂಜಿ ಪದ್ಧತಿಯನ್ನೇ ತೆಗೆದು ಹಾಕಬೇಕಾಯಿತು. 

ಹೈಸ್ಕೂಲಿನಲ್ಲಿ ರಾಮ್‌ಗೆ ಜಾತಿಯ ಆಧಾರದ ಮೇಲೆ ಸ್ಕಾಲರ್‍‌ಶಿಪ್ಪಿಗೆ ಅರ್ಜಿ ಹಾಕಲು ಗೆಳೆಯರು ಹೇಳಿದರು. ಅಷ್ಟೊತ್ತಿಗಾಗಲೇ ಇಂಗ್ಲಿಷ್ ಭಾಷೆಯ ಮೇಲೆ ಹಿಡಿತ ಸಾಧಿಸಿದ್ದ ರಾಮ್, ‘ನನ್ನ ಪ್ರತಿಭೆ ನೋಡಿ ಅವರೇ ಸ್ಕಾಲರ್‍‌ಶಿಪ್ ಕೊಡಬೇಕು’ ಎಂದು, ಜಾತಿಯ ಆಧಾರದ ಮೇಲೆ ಸ್ಕಾಲರ್‍‌ಶಿಪ್ ಹಾಕಲು ಒಪ್ಪಲಿಲ್ಲ. ಹುಡುಗ ರಾಮ್ ಭಾಷಣ ಕಲೆ ಹಾಗೂ ಕುಸ್ತಿ ಎರಡರಲ್ಲೂ ತಯಾರಾಗುತ್ತಿದ್ದ!
ರಾಮ್ ಮುಂದೆ ಬನಾರಸ್ ಯೂನಿವರ್ಸಿಟಿಗೆ ಬಂದಾಗ ಅಲ್ಲಿ ಹುಡುಗನ ಪ್ರತಿಭೆಗೆ ತಕ್ಕಂತೆ ಬಿರ್ಲಾ ಸ್ಕಾಲರ್‍‌ಶಿಪ್ ಸಿಕ್ಕಿತು; ಕೈಗೆ ಬಂದ ಸ್ಕಾಲರ್‍‌ಶಿಪ್ ರಾಮ್ ಬಾಯಿಗೆ ಬರುವುದಕ್ಕೆ ಅಡ್ಡಿಗಳಿದ್ದವು. ಜಾತಿಯ ಕಾರಣಕ್ಕಾಗಿ ಇತರ ಜಾತಿಯ ಹುಡುಗರುಗಳಿದ್ದ ಜನರಲ್ ಹಾಸ್ಟೆಲಿನಲ್ಲಿರಲು ರಾಮ್‌ಗೆ ಅವಕಾಶವಿರಲಿಲ್ಲ. ರಾಮ್ ಕ್ಯಾಂಪಸ್ ಹೊರಗೆ ರೂಮ್ ಮಾಡಿಕೊಂಡು ತಾನೇ ಅಡಿಗೆ ಮಾಡಿಕೊಳ್ಳಬೇಕಾಯಿತು. ಬನಾರಸ್ ವಿಶ್ವವಿದ್ಯಾಲಯದ ಸಾವಾಸವೇ ಬೇಡವೆಂದು ರಾಮ್ ಕೊನೆಗೆ ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಪದವಿ ಶಿಕ್ಷಣ ಮುಗಿಸಿದ್ದಾಯಿತು.

ತರುಣ ಜಗಜೀವನರಾಮ್ ಸ್ವಾತಂತ್ರ‍್ಯ ಚಳುವಳಿಗೆ ಪೂರ್ಣ ಪ್ರಮಾಣದಲ್ಲಿ ಇಳಿದರು. ಸ್ವಾತಂತ್ರ‍್ಯ ಹೋರಾಟಗಾರ ಜಗಜೀವನರಾಮರ ಜೈಲುವಾಸ, ಸಂಕಷ್ಟಗಳ ವಿವರಗಳು ಇವತ್ತಿಗೂ ಹೆಚ್ಚು ಪರಿಚಿತವಿಲ್ಲ. ಕಾಂಗ್ರೆಸ್ ನಾಯಕ ಬಾಬೂ ರಾಜೇಂದ್ರಪ್ರಸಾದ್ ಈ ತರುಣನ ಸಂಘಟನಾ ಶಕ್ತಿ ಕಂಡು ಕಾಂಗ್ರೆಸ್ ಸಂಘಟನೆಯಲ್ಲಿ ಹೆಚ್ಚಿನ ಜವಾಬ್ದಾರಿ ಕೊಟ್ಟರು. ಮುಂದೆ ಸಮಾಜವಾದಿಗಳಾದ ಜಯಪ್ರಕಾಶ್ ನಾರಾಯಣ್, ರಾಮನಂದನ ಮಿಶ್ರಾ ಮೊದಲಾದವರು ಬಂಧಿಯಾಗಿದ್ದ ಹಜಾರಿಭಾಗ್ ಜೈಲಿನಲ್ಲಿ ಜಗಜೀವನರಾಮ್ ಕೂಡ ಬಂಧಿಯಾಗಿದ್ದರು. ಸಮಾಜವಾದಿಗಳು ಜೈಲಿನಿಂದ ಪರಾರಿಯಾದ ನಂತರ, ಅಲ್ಲಿದ್ದ ಕಾಂಗ್ರೆಸ್ ಕೈದಿಗಳಿಗೆ ಜೈಲಿನ ಅಧಿಕಾರಿಗಳು ಚಿತ್ರಹಿಂಸೆ ಕೊಟ್ಟರು. ಜಗಜೀವನರಾಮ್ ಆರೋಗ್ಯ ಕೆಟ್ಟು ಹೋಯಿತು.

ಜಗಜೀವನರಾಮ್ ಜೈಲಿನಿಂದ ಬಿಡುಗಡೆಯಾಗುವ ಹೊತ್ತಿಗೆ ಗಾಂಧೀಜಿ ೧೯೪೨ರಲ್ಲಿ ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಕರೆ ಕೊಟ್ಟರು; ದೇಶದಲ್ಲಿ ಮಿಂಚಿನ ಸಂಚಾರವಾಯಿತು. ಬ್ರಿಟಿಷ್ ಸರ್ಕಾರ ಎಲ್ಲ ಮುಂಚೂಣಿ ಕಾಂಗ್ರೆಸ್ ನಾಯಕರನ್ನೂ ಅರೆಸ್ಟ್ ಮಾಡಿತು. ಜನರೇ ನಾಯಕರಾದರು. ಸಮಾಜವಾದಿ ನಾಯಕರು ಭೂಗತರಾಗಿ ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸಲೆತ್ನಿಸುತ್ತಿದ್ದರು.  ಜಗಜೀವನರಾಮ್ ಪೊಲೀಸರ ಕಣ್ತಪ್ಪಿಸಿ ಕಲ್ಕತ್ತಾಕ್ಕೆ ಬಂದರು‌. ನಂತರ ಬಿಹಾರಕ್ಕೆ ವಾಪಸಾಗಿ ಸಂಪರ್ಕ ಜಾಲ ಕತ್ತರಿಸುವ ಕೆಲಸಕ್ಕೆ ಜನರನ್ನು ಸಂಘಟಿಸತೊಡಗಿದರು.  

ಬ್ರಿಟಿಷರ ದಮನ ಹೆಚ್ಚತೊಡಗಿತ್ತು. ಪಾಟ್ನಾದ ಜನ ತಮ್ಮದೇ ಊರಿನಲ್ಲಿ ಬೇರೆ ಕಡೆ ಓಡಾಡಲು ಪಾಸ್ ತೆಗೆದುಕೊಳ್ಳಬೇಕಾಗಿತ್ತು. ಜಗಜೀವನರಾಮ್ ಬಳಿ ಪಾಸ್ ಇರಲಿಲ್ಲ. ಸೈನಿಕನೊಬ್ಬ ಬ್ಯಾರಿಕೇಡ್ ಬಳಿ ಅವರನ್ನು ತಡೆದ. ರಾಮ್ ತಮ್ಮ ಜೇಬಿನಲ್ಲಿದ್ದ ಯಾವುದೋ ಹಳೇ ಇನ್ವಿಟೇಶನ್ ಕಾರ್ಡ್ ಝಳಪಿಸಿದರು. ಸೈನಿಕ ದೂಸರಾ ಮಾತಾಡದೆ ಹಾದಿ ಬಿಟ್ಟ! ಮತ್ತೊಂದೆಡೆ ಬ್ಯಾರಿಕೇಡುಗಳ ಬಳಿ ಬ್ರಿಟಿಷ್ ಸೇನೆಯಲ್ಲಿದ್ದ ಅಮೆರಿಕನ್ ಸೈನಿಕರು, ‘ನಾವು ಕೊಲೆಗಡುಕರಿಂದ, ಢಕಾಯಿತರಿಂದ ನಗರವನ್ನು ರಕ್ಷಿಸಲು ನಿಂತಿದ್ದೇವೆ’ ಎಂದರು. 

ರಾಮ್ ಅಮೆರಿಕದ ಸ್ವಾತಂತ್ರ‍್ಯ ಹೋರಾಟ ಕುರಿತ ಪಾಂಫ್ಲೆಟ್ ಹೊರ ತೆಗೆಯುತ್ತಾ, ವಾಶಿಂಗ್ಟನ್, ಜೆಫರ್ಸನ್, ಲಿಂಕನ್ ಅಮೆರಿಕದಲ್ಲಿ ನಡೆಸಿದ ಹೋರಾಟಗಳ ಬಗ್ಗೆ ಅಮೆರಿಕನ್ ಸೈನಿಕರಿಗೇ ಭಾಷಣ ಮಾಡಿದರು! ಭಾರತದಲ್ಲೂ ನಾವು ಅದೇ ರೀತಿ ಹೋರಾಡುತ್ತಿದ್ದೇವೆ ಎಂದು ಮನವರಿಕೆ ಮಾಡಿಕೊಟ್ಟರು. ಅವರ ಇಂಗ್ಲಿಷ್ ಭಾಷೆ, ಚರಿತ್ರೆಯ ಜ್ಞಾನ, ಸಮಯಸ್ಫೂರ್ತಿ ಎಲ್ಲ ಸೇರಿ ಪರಿಣಾಮ ಅದ್ಭುತವಾಗಿತ್ತು. ಅಮೆರಿಕನ್ ಸೈನಿಕರು ಸುಮ್ಮನಾದರು. ಪಾಟ್ನಾದ ತುಂಬ ಇದ್ದ ಅಮೆರಿಕನ್ ಸೈನಿಕರಿಗೆಲ್ಲ ಈ ಕರಪತ್ರಗಳು ತಲುಪಿದವು!   

ಶತ್ರುವಿನ ವಿರುದ್ಧ ಉಪಾಯ ನೈತಿಕ ಹೋರಾಟದ ಮಾರ್ಗಗಳಲ್ಲೊಂದು ಎಂಬುದು ಜಗಜೀವನರಾಮ್ ಜೀವನದಲ್ಲಿ ಮತ್ತೆ ಮತ್ತೆ ಕಾಣುತ್ತದೆ. ಅವರ ಒಟ್ಟು ರಾಜಕೀಯ ಬದುಕಿನಲ್ಲಿ ಕಾಣುವ ಚಾಣಾಕ್ಷತನ, ಸರ್ವೈವಲ್ ಗುಣ ಬ್ರಿಟಿಷರ ವಿರುದ್ಧದ ಹೋರಾಟದ ಕಾಲದಲ್ಲಿ ಮೈಗೂಡಿದ್ದ ಗುಣವಾಗಿತ್ತು. ಸಿಟ್ಟಿಗೆದ್ದು ಹೂಜಿ ಒಡೆದ ಹುಡುಗ ಕುಸ್ತಿ ಪಟುವಾಗಿ ಮೈಗೂಡಿಸಿಕೊಂಡ ಹಲವು ಪಟ್ಟುಗಳಂತೆ ಅವರ ರಾಜಕೀಯ ಪಟ್ಟುಗಳು ಕಾಣುತ್ತವೆ! ಮುಂದೆ ಕಾಂಗ್ರೆಸ್ ಒಡೆದಾಗ ಕಾಂಗ್ರೆಸ್ ಅಧ್ಯಕ್ಷರಾಗಿ ಅವರು ಇಂದಿರಾ ನೇತೃತ್ವದ ಕಾಂಗ್ರೆಸ್ ಕಟ್ಟಲು ನೆರವಾದ ರೀತಿ; ರಕ್ಷಣಾ ಸಚಿವರಾಗಿ ಯುದ್ಧ ಕಾಲದಲ್ಲಿ ಅವರು ಬಳಸುತ್ತಿದ್ದ ಸಂಕ್ಷಿಪ್ತ ಖಚಿತ ಡಿಪ್ಲೊಮ್ಯಾಟಿಕ್ ಭಾಷೆ; ಹಸಿರು ಕ್ರಾಂತಿಯ ನೇತಾರನಾದ ರೀತಿ… ಇವೆಲ್ಲವೂ ಅವರ ವ್ಯಕ್ತಿತ್ವದ ಯಶಸ್ಸಿನ ಕತೆಯನ್ನೇ ಹೇಳುತ್ತವೆ.

ದೇಶದ ಪ್ರಧಾನಿ ಪಟ್ಟ ಇನ್ನೇನು ಕೈಗೆಟುಕುವವರೆಗೂ ಬೆಳೆದ ಜಗಜೀವನರಾಮ್ ಬಗ್ಗೆ ದೇಶದ ಪತ್ರಿಕೆಗಳು, ಬಾಳ್ ಠಾಕ್ರೆ ಥರದ ವ್ಯಂಗ್ಯಚಿತ್ರಕಾರರು ಮೂಡಿಸಿದ್ದ ನೀಚ ಪೂರ್ವಗ್ರಹಗಳು ಒಂದೊಂದಲ್ಲ. ಎಪ್ಪತ್ತರ ದಶಕದ ಕೊನೆಯ ಹೊತ್ತಿಗೆ ನಮ್ಮಂಥ ಗ್ರಾಮೀಣ ಪ್ರದೇಶದ ಪುಟ್ಟ ಊರುಗಳ ಹುಡುಗರ ಮನಸ್ಸಿನಲ್ಲಿ ಜಗಜೀವನರಾಮ್ ಬಗ್ಗೆ ತುಂಬಿದ್ದ ಕೆಟ್ಟ ಪೂರ್ವಗ್ರಹಗಳನ್ನು ಹೊಡೆದೋಡಿಸಿದ್ದು ‘ಪ್ರಜಾವಾಣಿ’ಯಲ್ಲಿ ಲಂಕೇಶರು ಬರೆದ ಒಂದು ಶನಿವಾರದ ಲೇಖನ. ಆ ಲೇಖನ ಈಚೆಗೆ ಪ್ರಕಟವಾದ ಟೀಕೆಟಿಪ್ಪಣಿಯ ಸಂಪುಟ-೧ರಲ್ಲಿದೆ.  

ಈ ಮೊದಲು ಕೂಡ ನಾನು ಉಲ್ಲೇಖಿಸಿರುವ ಈ ಬೆಚ್ಚಗಿನ ಬರಹದ ಭಾಗಗಳನ್ನು ಇಲ್ಲಿ ಮತ್ತೆ ಕೊಡುತ್ತಿರುವೆ. ಆ ಕಾಲದಲ್ಲಿ ಲಂಕೇಶರು ರಾಜಕಾರಣಿಗಳ ಹೆಸರನ್ನು, ರಾಜಕೀಯ ಸನ್ನಿವೇಶಗಳನ್ನು ಕಚಗುಳಿಯಿಡುವಂತೆ ಮಾರ್ಪಡಿಸಿ ಬರೆಯುತ್ತಿದ್ದರು: ಅಲ್ಲಿ ಭಾರತ ಸರ್ಕಾರ ‘ಬರ್ತೂರು ಪಂಚಾಯ್ತಿ’ ಆಗಿತ್ತು; ಇಂದಿರಾಗಾಂಧಿ, ‘ಉತ್ತರಳ್ಳಿ ಇಂದ್ರವ್ವ’; ಜಗಜೀವನರಾಮ್, ‘ಜೀವನರಾಮು’; ಚರಣ್ ಸಿಂಗ್, ‘ಚರಣಪ್ಪ’ ; ರಾಷ್ಟ್ರಪತಿ ಸಂಜೀವ ರೆಡ್ಡಿ, ‘ಸಂಜೀವಿ’… ಹೀಗೆ ಲಂಕೇಶರ ರಾಜಕೀಯ ವಿಮರ್ಶಾ ದೃಶ್ಯಾವಳಿಗಳ ಪಾತ್ರಗಳಿರುತ್ತಿದ್ದವು! ಪ್ರಬಲಜಾತಿಗಳ ರಾಜಕೀಯ ಕುತಂತ್ರದಿಂದ ಪ್ರಧಾನಮಂತ್ರಿ ಪಟ್ಟ ಜಗಜೀವನರಾಮರಿಗೆ ತಪ್ಪಿದ್ದ ಆ ವಾರ ಲಂಕೇಶರು ಬರೆದ ಬರಹದ ಭಾಗಗಳು:   

“ನಮ್ಮ ‘ಜೀವನರಾಮು’ ಕೊನೆಗೂ ಛೇರ್ಮನ್ ಆಗಲಿಲ್ಲ... ರಾಮು ನಮ್ಮೆಲ್ಲರ ಮನಸ್ಸಿನಲ್ಲಿ ಬಹಳ ಕಾಲ ಉಳಿಯುವ ಕಪ್ಪು ಸಂಕೇತ. ನಮ್ಮ ಅನ್ಯಾಯಗಳ ಸಂಕೇತ ಕೂಡ...

ಪಂಚಾಯ್ತಿಯ ಜನ ಬಹಳ ಮಾತಾಡಿಕೊಳ್ಳುತ್ತಾರೆ- ಗುಂಡಗೆ ಕಪ್ಪಗಿರುವ ಜೀವನರಾಮು ವ್ಯಂಗ್ಯ ಚಿತ್ರ ಬರೆಯುವವನಿಗೆ ಹಬ್ಬವಾಗಬಲ್ಲ. ಈತನನ್ನು ಬಿಳೀ ಹಾಳೆಯ ಮೇಲೆ ಕಪ್ಪು ಇಂಕು ಚೆಲ್ಲಿ ಎರಡು ಕಣ್ಣು ಬರೆದು ಬಿಳಿ ಟೋಪಿ ಹಾಕಿ ತಮಾಷೆ ಮಾಡುವುದು ಸುಲಭ. ಆದರೆ ಈ ಕಪ್ಪು ಆಕಾರದ ಹಿಂದೆ ಅರ್ಧ ಶತಮಾನದ ಅನುಭವ ಇದೆ. ಕೋಟ್ಯಂತರ ಕಪ್ಪು ಜನರ ನೋವು ಇದೆ. ಗಾಂಧೀಜಿ ಅನುಭವಿಸಿದ ದುರಂತವಿದೆ. ವೇದೋಪನಿಷತ್ತು ಹೇಳಿ ಮೋಸ ಮಾಡಿದವರ, ಸುಲಿದು ಉಂಡವರ ಅಟ್ಟಹಾಸದ ನೆನಪುಗಳಿವೆ. ಚರಣಪ್ಪನಂತ ಕಟ್ಟೆ ಮುಖಂಡರ ತಾತ್ಸಾರ ಮತ್ತು ಶೋಷಣೆ ಇದೆ. ಯಜಮಾನ ಸಂಜೀವಿಯಂಥವರ ಪಿತೂರಿ ಮತ್ತು ಸೇಡುಗಳ ಬರೆ ಸ್ಪಷ್ಟವಾಗಿದೆ. ಜಾತಿ, ವರ್ಗಗಳ ಕೊಲೆಗಡುಕ ಚೌಕಟ್ಟು ನಮ್ಮೆಲ್ಲರ ಕಣ್ಣು ಕುಕ್ಕುವುದು ಸರಳವಾಗಿ ಎದ್ದು ಕಾಣುತ್ತಿದೆ.

ಜೀವನರಾಮು ಈಗಲಾದರೂ ತನ್ನ ದಾರಿ ಕಂಡುಕೊಳ್ಳಬೇಕು…ಜೀವನ ರಾಮುವಿನ ಎರೆಮಣ್ಣಿನ ರಾಜಕೀಯದಿಂದ ಒಳ್ಳೆಯದಾಗುತ್ತದೆ. ಗಾಳಿಯಲ್ಲಿ ಓಡಾಡುವ ಮೇಲುವರ್ಗದ ಜನಕ್ಕೆ ಕಾಣದೆ ಇದ್ದದ್ದು ಈ ಮಣ್ಣಿನ ಕಂದಮ್ಮನಿಗೆ ಕಾಣಬೇಕಾಗುತ್ತದೆ. ನಮ್ಮ ಕಪ್ಪು ಮುಖದ ಮಗುವಿನಂಥ ರಾಮುವಿನಲ್ಲಿ ಇನ್ನೂ ಸಾಕಷ್ಟು ಜೀವನದ್ರವ್ಯ ಇದೆಯೆಂದು ಆಶಿಸೋಣ. ಈತನ ನೋವಿನಲ್ಲಿ ಭಾಗಿಗಳಾಗೋಣ. ನಮ್ಮ ರಾಮು ತನ್ನ ಸ್ಪರ್ಧೆಯಲ್ಲಿ ಸೋತರೂ ಅದಕ್ಕಿರುವ ನಿಜವಾದ ಗೆಲುವಿನ ಬಗ್ಗೆ ಆಶಾವಾದಿಗಳಾಗೋಣ. ರಾಮುವಿನ ಬಗ್ಗೆ ಬರೆಯುವಾಗ ನನ್ನಲ್ಲಿ ವ್ಯಂಗ್ಯ ಸತ್ತು ಕಣ್ಣಂಚಿನಲ್ಲಿ ನೀರು ಕಾಣಿಸಿಕೊಳ್ಳುತ್ತಿದೆ. ಇದು ಖಂಡಿತ ಕರುಣೆ ಅಥವಾ ಖೊಟ್ಟಿ ಅನುಕಂಪದ್ದಲ್ಲ. ಈ ಗಾಂಧೀಜಿಯ ನೆಲದ ಅನ್ಯಾಯದಿಂದ ಹೊರಟದ್ದು.”

ಜಗಜೀವನರಾಮರ ಬಗೆಗಷ್ಟೇ ಅಲ್ಲ, ಒಟ್ಟಾರೆ ದಲಿತ ಸಮುದಾಯದ ಬಗೆಗೆ ಹದಿಹರಯದಲ್ಲೇ ಜಾತ್ಯತೀತ ಆರೋಗ್ಯಕರ ದೃಷ್ಟಿಕೋನ ಲಂಕೇಶರಿಂದ ನನಗೆ ದೊರೆತದ್ದು ಒಂದು ಭಾಗ್ಯಶಾಲಿ ಗಳಿಗೆಯೆಂದು ಇವತ್ತಿಗೂ ಅನ್ನಿಸುತ್ತದೆ.

ಇದಾದ ಮೇಲೆ ಜಗಜೀವನರಾಮ್ ಕುರಿತ ಬರಹ, ಪುಸ್ತಕಗಳನ್ನು ಓದಿದೆ; ಅವರ ಭಾಷಣದ ಧ್ವನಿಮುದ್ರಿಕೆಗಳನ್ನು ಕೇಳಿದೆ. ಅಲ್ಲಿ ಅವರ ಪಾಂಡಿತ್ಯ, ಆಳವಾದ ಜ್ಞಾನ ನನ್ನನ್ನು ತಟ್ಟಿದವು. ಜಾತಿವ್ಯವಸ್ಥೆಯನ್ನು ವಿಮರ್ಶಿಸುವಾಗ, ಕಂಡುಂಡ ಅನುಭವ ಹಾಗೂ ಅಂಬೇಡ್ಕರ್‍ ಪರಿಭಾಷೆ ಎರಡನ್ನೂ ಅವರು ಬಳಸುತ್ತಿದ್ದರು. ಇಂಗ್ಲಿಷ್ ಭಾಷೆಯ ಮೇಲಿನ ಅದ್ಭುತ ಹಿಡಿತ ಹಾಗೂ ಇಂಗ್ಲಿಷಿನ ಸಹಜ, ಸರಾಗ ಬಳಕೆಯ ಕಲೆ ಜಗಜೀವನರಾಮರಿಗೆ ದಕ್ಕಿದ್ದವು. 

ಹ್ಯಾಪಿ ಬರ್ತ್ ಡೇ ಬಾಬೂಜಿ!
 
 
 

Share on:

Comments

3 Comments



| ನರಸಿಂಹಮೂರ್ತಿ ಹಳೇಹಟ್ಟಿ

ಬಾಬೂಜಿ ಈ ದೇಶದ ಪ್ರಧಾನಿ ಆಗಬೇಕಿತ್ತು. ಅದು ಸಾಧ್ಯವಾಗದೇ ಹೋದದ್ದು ಇಂಡಿಯಾದ ದುರಂತ. ಈ ಬರಹ ಓದಿದರೆ ಎಂತಹವರ ಕಣ್ಣಲ್ಲೂ ನೀರು ಜಿನುಗುತ್ತದೆ!


| ಮಂಜುನಾಥ್ ಸಿ ನೆಟ್ಕಲ್

ಬಾಬು ಜಗಜೀವನರಾಂ ಅವರನ್ನು ಕುರಿತ ಮನಮಿಡಿಯುವ ಈ ಬರಹ ಸಕಾಲಿಕವಾಗಿದೆ ಅವರ ದಿಟ್ಟ ಹೋರಾಟ, ಶೋಷಿತ ಮತ್ತು ಅವಮಾನಿತರಾದವರಿಗೆ ಆತ್ಮ ಸ್ಥೈರ್ಯ ನೀಡುವಂತೆ ಇದೆ ಬಾಬೂಜಿ ಅನುಭವಿಸಿದ ಅವಮಾನ, ಕೆಟ್ಟ ಪೂರ್ವಾಗ್ರಹ ಪೀಡಿತ ವ್ಯಂಗ್ಯ ಇವುಗಳನ್ನು ಈಗಲೂ ಸಹ ಅನೇಕ ದಲಿತ ನಾಯಕರು ಎದುರಿಸುತ್ತಿದ್ದಾರೆ ಅವರ ಹಾಗೆಯೇ ರಾಜಕೀಯದಲ್ಲಿ ಉನ್ನತ ಹುದ್ದೆಗಳಿಂದ ವಂಚಿತರಾಗುತ್ತಿದ್ದಾರೆ....ಅವಮಾನಿಸುವರ ಈ ಹೀನ ಮನಸ್ಥಿತಿ ಎಂದು ಬದಲಾಗುತ್ತದೆ ಕಾದು ನೋಡಬೇಕು....


| Vasantha

ಲೇಖನ ಬಾಬು ಜಗಜೀವನರಾಮ್ ಅವರ ಜೀವನ ದರ್ಶನ




Add Comment


Mundana Kathana Nataka

YouTube






Recent Posts

Latest Blogs