ಹಾದಿ ಕರೆದೊಯ್ಯವುದು ಹಾದಿಗೆ!
by Nataraj Huliyar
ಹೀಗೇ ಈ ಅಂಕಣಕಾರ 'ಲೇಖಕಮರ್ಕಟ’ನಂತೆ ಒಂದು ಐಡಿಯಾದ ಕೊಂಬೆಯಿಂದ ಇನ್ನೊಂದಕ್ಕೆ ಜಿಗಿಯುತ್ತಿರುವಾಗ ಇದ್ದಕ್ಕಿದ್ದಂತೆ ರಾಬರ್ಟ್ ಫ್ರಾಸ್ಟ್ ಬರೆದ 'ದ ರೋಡ್ ನಾಟ್ ಟೇಕನ್’ ಎಂಬ ಪ್ರಖ್ಯಾತ ಕವಿತೆಯಲ್ಲಿ ಬರುವ 'ವೇ ಲೀಡ್ಸ್ ಆನ್ ಟು ವೇ…’ ಎಂಬ ಬಣ್ಣನೆ ತೇಲಿ ಬರುತ್ತದೆ. ಬದುಕಿನಲ್ಲಿ ನಾವು ಹಿಡಿಯುವ ಒಂದು ಹಾದಿ ಮತ್ಯಾವುದೋ ಹಾದಿಗೆ ಒಯ್ಯುತ್ತದಲ್ಲಾ…ಎಂದು ಕವಿತೆಯ ಕೇಂದ್ರ ಪಾತ್ರದ ಅನ್ನಿಸಿಕೆಯಲ್ಲಿ ಇರುವ ಸತ್ಯಗಳು ಮಿನುಗತೊಡಗುತ್ತವೆ.
ಹೀಗೇ ಒಂದು ಹಾದಿ ಇನ್ನೊಂದಕ್ಕೆ, ಮತ್ತೊಂದಕ್ಕೆ ಕರೆದೊಯ್ಯುತ್ತಲೇ ನನ್ನ ಅಥವಾ ನಿಮ್ಮ ಅಥವಾ ಎಲ್ಲರ ಕ್ರಿಯೆಗಳೂ, ಬರಹಗಳೂ ಹುಟ್ಟಿರಬಹುದೇ? ಬರಹಗಳ ವಿಷಯದಲ್ಲಂತೂ, ನನಗರಿವಿಲ್ಲದೆಯೇ ನನ್ನನ್ನು ಎಲ್ಲೋ ಒಯ್ದು 'ಪರವಶ’ವಾಗಿಸಿದ ಬರಹಗಳೇ ಆಕರ್ಷಕ ಎನ್ನಿಸತೊಡಗುತ್ತವೆ. 'ಬುಕ್ ಹಾಪಿಂಗ್’ ಅಥವಾ ಪುಸ್ತಕ ಜಿಗಿತದ ನನ್ನ ಪ್ರಿಯ ಕ್ರಿಯೆಗಳ ಬಗ್ಗೆ ಕೃತಜ್ಞತೆ ಮೂಡುತ್ತದೆ.
ಹಾಗೆಂದು, ಇದೇನೂ ಶಿಸ್ತುಬದ್ಧ ಚೌಕಟ್ಟಿನ ಬರವಣಿಗೆ ಕುರಿತ 'ಮೂಗುಮುರಿತ’ವಲ್ಲ! ಚೌಕಟ್ಟಿನ ಬರವಣಿಗೆಯನ್ನು, ಬರವಣಿಗೆಗಾಗಿ ರಿಸರ್ಚನ್ನು, ನಾನೂ ಬಯಸುವವನೇ. 'ರಿಸರ್ಚ್ ಇಲ್ಲದೆ ನಿಮ್ಮ ಯಾವ ಬರವಣಿಗೆಯೂ ಇಲ್ಲ’ ಎಂದು ಲೇಖಕಿಯೊಬ್ಬರು ಗುರುತಿಸಿ ಹೇಳುವಷ್ಟರ ಮಟ್ಟಿಗೆ ಈ ಅಂಕಣಕಾರನ ರಿಸರ್ಚ್ ನಿತ್ಯ ನಡೆಯುತ್ತಿರುತ್ತದೆ. ಇದೆಲ್ಲ ಯಾರಾದರೂ ವಿದ್ಯಾರ್ಥಿನಿಗೋ, ಮೇಡಂ, ಮೇಷ್ಟ್ರುಗಳಿಗೋ ಸ್ಫೂರ್ತಿ ಹುಟ್ಟಿಸಲಿ ಎಂದು ಮಾತ್ರ ಈ ವೈಯಕ್ತಿಕ ಅಭ್ಯಾಸವನ್ನು ಇಲ್ಲಿ ಹೇಳುತ್ತಿರುವೆ. ಮಾರನೆಯ ದಿನದ ಪತ್ರಿಕೆಗೆ ಹಿಂದುಳಿದ ವರ್ಗಗಳನ್ನು ಕುರಿತ ಲೇಖನ ಬರೆಯಹೊರಟಾಗ; ವರ್ಷಗಟ್ಟಲೆ ಸಿಲ್ವಿಯಾ ಪ್ಲಾತ್-ಟೆಡ್ ಹ್ಯೂಸ್ ಕವಿ-ಕಾವ್ಯ ಕುರಿತ ’ಕವಿಜೋಡಿಯ ಆತ್ಮಗೀತ’ ಕಥಾಕಾವ್ಯ ಬರೆಯುತ್ತಲೇ ಇರುವಾಗ; ಪಠ್ಯಪುಸ್ತಕಗಳ ಬೋಧನಾವಿಜ್ಞಾನ ಕುರಿತ ಮುಂದಿನ ವಾರದ ಉಪನ್ಯಾಸಕ್ಕೆ ಸಿದ್ಧತೆ ಮಾಡುವಾಗ… ಒಂದಲ್ಲ ಒಂದು ಥರದ ರಿಸರ್ಚ್ ನಡೆಯುತ್ತಲೇ ಇರುತ್ತದೆ. ಆದರೆ ಆ ರಿಸರ್ಚ್ ಕೂಡ ಕವಿತೆ, ಕತೆ, ನಾಟಕಗಳ ಬರವಣಿಗೆಯ ಹಾಗೆ ನನ್ನನ್ನು ಎಲ್ಲಿಂದ ಎಲ್ಲಿಗೋ ಒಯ್ದರೆ ಮಾತ್ರ ಏನೋ ಹೊಸತು ಕಂಡ ನಿರಾಳ; ಇಲ್ಲದಿದ್ದರೆ ಬರಿ ಕಾವಳ!
ಎರಡು ವಾರದ ಕೆಳಗೆ ಇದೇ ಅಂಕಣದಲ್ಲಿ ರಷ್ಯನ್ ಮಹಿಳೆ ನೀನಾ ಕುಟಿನಾರ ಗುಹಾವಾಸದ ಬಗ್ಗೆ ಬರೆಯುತ್ತಿರುವಾಗಲೇ ’ಎ ಪ್ಯಾಸೇಜ್ ಟು ಇಂಡಿಯಾ’ದ ಮರಬಾರ್ ಗುಹೆಗಳು ಸುಳಿದಿದ್ದನ್ನು ನೀವು ಗಮನಿಸಿರಬಹುದು. ಹೀಗೆ ಒಂದು ಪ್ರತಿಮೆ ತಂತಾನೇ ಮತ್ತೊಂದಕ್ಕೆ ಒಯ್ಯುವ ಗಳಿಗೆಗಳೇ ನನ್ನ ನಿತ್ಯದ ಅದೃಷ್ಟದ ಗಳಿಗೆಗಳು! ರಷ್ಯನ್ ಮಹಿಳೆಯ ಗುಹೆ ’ಎ ಪ್ಯಾಸೇಜ್ ಟು ಇಂಡಿಯಾ’ ಕಾದಂಬರಿಗೆ; ನಂತರ ಸ್ತ್ರೀವಾದಿಯೊಬ್ಬರು ಅಗೆದುಕೊಟ್ಟ ಅದೇ ಹೆಸರಿನ ಸಿನಿಮಾಕ್ಕೆ; ಗೆಳೆಯ ವಿಖಾರ್ ಅಹಮದ್ ಹುಡುಕಿಕೊಟ್ಟ ‘ಎ ಪ್ಯಾಸೇಜ್ ಟು ಇಂಡಿಯಾ’ಗೆ ನೂರು ತುಂಬಿದ್ದನ್ನು ಕುರಿತ ಬರಹಕ್ಕೆ ನನ್ನನ್ನು ಕರೆದೊಯ್ದಿತು.
ಇಪ್ಪತ್ತೇಳು ವರ್ಷಗಳ ಕೆಳಗೆ ಒಂದು ಸಂಜೆ ಲಂಕೇಶರ ಜೊತೆ ‘ಎ ಪ್ಯಾಸೇಜ್ ಟು ಇಂಡಿಯಾ’ ಸಿನಿಮಾ ನೋಡುತ್ತಿರುವಾಗ, ಲಂಕೇಶರು ಗೋಡ್‌ಬೋಲೆಯ ಪಾತ್ರವನ್ನು ಮತ್ತೆ ಮತ್ತೆ ಪ್ರಸ್ತಾಪಿಸಿ ನಮ್ಮನ್ನೆಲ್ಲ ನಗಿಸುತ್ತಿದ್ದ ಸುಂದರ ಚಣಗಳು ನೆನಪಾಗುತ್ತವೆ: ಪ್ರೊಫೆಸರ್ ಗೋಡ್‌ಬೋಲೆ ಮೈಯೆಲ್ಲ ಎಣ್ಣೆ ಸವರಿಕೊಂಡು, ಹೇಗೆ ಬೇಕೆಂದರೆ ಹಾಗೆ ಹಿಂದೂ ಫಿಲಾಸಫಿಯನ್ನು ನಾಲಗೆಯಲ್ಲೇ ನುಲಿಯಬಲ್ಲವನು. ’ಮರಬಾರ್ ಗುಹೆಗಳ ಪ್ರವಾಸ ಯಶಸ್ವಿಯೇ ಮಿಸ್ಟರ್ ಗೋಡ್‌ಬೋಲೆ?’ ಎಂದು ಫೀಲ್ಡಿಂಗ್ ಕೇಳಿದರೆ, ’ಹೌ ಕೆನ್ ಐ ಸೇ ಐ ವಾಸ್ ನಾಟ್ ದೇರ್’ ಎನ್ನುವವನು! ಯಾವುದೋ ಬಿಕ್ಕಟ್ಟಿನ ಬಗ್ಗೆ ‘ನಿನ್ನ ಅಭಿಪ್ರಾಯವೇನು?’ ಎಂದರೆ, ’ನನ್ನ ಅಭಿಪ್ರಾಯ ಕ್ರಿಯೆಯ ಪರಿಣಾಮವನ್ನು ಬದಲಿಸದು’ ಎಂದು ಅರೆ ಕಣ್ಣು ಮುಚ್ಚಿ ಅಪ್ಪಣೆ ಕೊಡಿಸುವನು!
ಗೋಡ್‌ಬೋಲೆಯ ‘ಹೌ ಕೆನ್ ಐ ಸೇ ಐ ವಾಸ್ ನಾಟ್ ದೇರ್’ ಎಂಬ ಮಾತನ್ನಂತೂ ಲಂಕೇಶ್ ಆಗಾಗ ಅನುಕರಿಸಿ ಹೇಳುತ್ತಾ ನಗೆ ಉಕ್ಕಿಸುತ್ತಿದ್ದರು. ಹೇಳಿದ ಸಮಯಕ್ಕಿಂತ ಮೊದಲೇ ಇಂಗ್ಲಿಷ್ ಟೀಚರ್ ಫೀಲ್ಡಿಂಗ್‌ನ ಮನೆಗೆ ಬಂದ ಡಾಕ್ಟರ್ ಅಝೀಝ್, ಸ್ನಾನ ಮಾಡುತ್ತಿರುವ ಫೀಲ್ಡಿಂಗ್‌ನನ್ನು ಎಡೆಬಿಡದೆ ಮಾತಾಡಿಸುವ ದೃಶ್ಯ ಬಂದಾಗ, ‘ನೋಡಿ- ಈ ಇಂಡಿಯನ್ಸ್‌ಗೆ ಯಾವನಾರೂ ಪಂಕ್ಚುಯಾಲಿಟಿ ಕಲಿಸೋಕಾಗುತ್ತೇನ್ರಿ! ಹೇಳಿದ ಟೈಮಿಗಿಂತ ಮೊದಲೇ ಬರೋದು; ಇಲ್ಲಾ ಯಾವಾಗಲೋ ಬರೋದು…’ ಎಂದು ತಮ್ಮ ನಿತ್ಯದ ಅನುಭವವೇ ರಿಪ್ಲೇ ಆದಂತೆ ಲಂಕೇಶ್ ಕಿರಿಕಿರಿಗೊಳ್ಳುತ್ತಿದ್ದರು.
ಫಾಸ್ಟರನ ಕಾದಂಬರಿಯನ್ನು ಮೆಚ್ಚಿ, ಪ್ರಾಯಶಃ ಪಾಠ ಮಾಡಿದ್ದ ಇಂಗ್ಲಿಷ್ ಮೇಷ್ಟ್ರು ಲಂಕೇಶ್ ಈ ಸಿನಿಮಾವನ್ನೂ ಹಲವು ಸಲ ನೋಡಿದಂತಿತ್ತು. ಈ ಕಾದಂಬರಿ, ಸಿನಿಮಾಗಳೆರಡೂ ಲಂಕೇಶರನ್ನು ಯಾಕಿಷ್ಟು ಸೆಳೆದಿದ್ದವು ಎಂಬುದು ಈಚೆಗೆ ಇವೆರಡನ್ನೂ ಹೊಕ್ಕಾಗ ನನಗೆ ಸರಿಯಾಗಿ ಅರ್ಥವಾಗತೊಡಗಿತು. ಅದೂ-ಇದರ ನಡುವೆಯೇ ಕಿಂಡಲ್‌ನಲ್ಲಿ ಈ ಕಾದಂಬರಿ ಓದುತ್ತಾ, ಬಿಟ್ಟು ಬಿಟ್ಟು ಸಿನಿಮಾ ನೋಡುತ್ತಿದವನಿಗೆ ಯಾವ ಕೆಲಸ ಮಾಡುತ್ತಿದ್ದರೂ ‘ಏ ಪ್ಯಾಸೇಜ್ ಟು ಇಂಡಿಯಾ’ದ ಪ್ಯಾಸೇಜಿನಲ್ಲೇ ಅಡ್ಡಾಡುತ್ತಿರುವಂತೆ ಭಾಸವಾಗುತ್ತಿತ್ತು! ಕಾದಂಬರಿಯಂಥ ಲಾಂಗ್ ನ್ಯಾರೇಟಿವ್‌ಗಳ- ಅಂದರೆ ಸುದೀರ್ಘ ನಿರೂಪಣೆಯ ಕೃತಿಗಳ- ಸಮ್ಮೋಹಿನಿ, ಮಾಯೆ, ಶಕ್ತಿ ಎಲ್ಲವೂ ಎಂದಿನಂತೆ ಮತ್ತೆ ಮೈಮನಕ್ಕಿಳಿಯತೊಡಗಿದವು.
ಇದು ಒಂಬತ್ತು ವರ್ಷದ ಹುಡುಗನಾಗಿದ್ದಾಗಿನಿಂದಲೂ ನನ್ನ ಕಾದಂಬರಿಲೋಕದ ಅನುಭವ! ಅದು ತ್ರಿವೇಣಿ, ಅಶ್ವಿನಿ, ಎಂ.ಕೆ. ಇಂದಿರಾ, ಕಾರಂತರ ಕಾದಂಬರಿಯಿರಲಿ; ನಂತರ, ಆಲ್ಬರ್ಟ್ ಕಾಮುವಿನ ’ಔಟ್‌ಸೈಡರ್’ ಕಾದಂಬರಿಯ ಕನ್ನಡಾನುವಾದ ‘ಅನ್ಯ’ ಇರಲಿ; ಅನಂತರ ವೀಣಾ ಶಾಂತೇಶ್ವರ, ಮಾರ್ಕ್ವೆಜ್, ಅಚಿಬೆ, ಸಲ್ಮಾನ್ ರಶ್ದಿಯವರ ಕಾದಂಬರಿಯಿರಲಿ… ಕಾದಂಬರಿ ತನ್ನೊಳಗೆ ನನ್ನನ್ನು ಬದುಕಿಸಿಕೊಳ್ಳುತ್ತಲೇ ಬಂದಿದೆ… ಅದು ಕಂಡ, ಕಾಣಿಸುವ ಲೋಕ ಇವತ್ತಿಗೂ ನನ್ನ ಒಳದ್ರವ್ಯವಾಗಿರುವಂತಿದೆ; ಕಾದಂಬರಿಯೊಡನಿರುವುದು ಎಂದರೆ ಬದುಕುವುದು ಕೂಡ ಎಂದು ನಂಬುವ ನನಗೆ ಕಾದಂಬರಿಗಳನ್ನು ಪಠ್ಯವಾಗಿಸುವ ಅವಕಾಶ ಕಳೆದುಕೊಂಡ ಕಾಲೇಜು ಮೇಷ್ಟ್ರುಗಳು, ಮೇಡಂಗಳು ನತದೃಷ್ಟರು ಎನ್ನಿಸುತ್ತದೆ; ಅವರು ತಮ್ಮ ವಿದ್ಯಾರ್ಥಿ, ವಿದ್ಯಾರ್ಥಿನಿಯರೊಡನೆ ಬದುಕಿನ ಸುದೀರ್ಘ ಸಂವಾದ ನಡೆಸುವ ಅದ್ಭುತ ಅವಕಾಶ ಕಳೆದುಕೊಂಡಿದ್ದಾರೆ… ಎನ್ನಿಸುತ್ತದೆ. ಈ ಮಾತನ್ನು ಮೊನ್ನೆ ಅಧ್ಯಾಪಕ, ಅಧ್ಯಾಪಕಿಯರ ಸಭೆಯಲ್ಲೂ ಹೇಳಿದೆ…
ಫಾಸ್ಟರ್ ೧೯೨೪ರಲ್ಲಿ ಬರೆದ ‘ಎ ಪ್ಯಾಸೇಜ್ ಟು ಇಂಡಿಯಾ’ಗೆ ಕಳೆದ ವರ್ಷ ನೂರು ವರ್ಷ ತುಂಬಿತು. ಈ ಕಾದಂಬರಿಯ ಕೇಂದ್ರ ಘಟನೆಯನ್ನು ಎರಡು ವಾರಗಳ ಕೆಳಗೆ ಬರೆದ ’ಗುಹಾರೂಪಕದ ಸುತ್ತ’ ಅಂಕಣದಲ್ಲಿ ಹೇಳಿದ್ದೇನೆ. ೧೯೮೪ರಲ್ಲಿ ಡೇವಿಡ್ ಲೀನ್ ಮಾಡಿದ ’ಎ ಪ್ಯಾಸೇಜ್ ಟು ಇಂಡಿಯಾ’ ಸಿನಿಮಾಕ್ಕೆ ನಲವತ್ತು ವರ್ಷ ತುಂಬಿತು. ಈ ಸಿನಿಮಾ ಫಾಸ್ಟರ್ ಕಾದಂಬರಿಯನ್ನು ನಾಟಕ ರೂಪಕ್ಕಿಳಿಸಿದ ಇಂಡಿಯನ್- ಅಮೆರಿಕನ್ ಲೇಖಕಿ ಶಾಂತಾ ರಾಮರಾವು ಅವರ ಕೃತಿಯನ್ನೂ ಆಧರಿಸಿದೆ. ಶ್ರೇಷ್ಠ ಸಿನಿಮಾ ನಿರ್ದೇಶಕ ಡೇವಿಡ್ ಲೀನ್ ಮಾಡಿರುವ ಸಿನಿಮಾ ಇವತ್ತಿಗೂ ಮಾಸಿಲ್ಲ. ಅದರಲ್ಲೂ ಕಾದಂಬರಿಯಲ್ಲಿ ಅಝೀಜ್ ಮುಖದ ಮೇಲಿನ ಹಿಂಜರಿಕೆ, ಆಗಾಗ ಪ್ರಕಟಗೊಳ್ಳುವ ಅವನ ಮೊಘಲ್ ಹೆಮ್ಮೆ, ಭಾರತದಲ್ಲಿ ಬದುಕುವ ವಿದ್ಯಾವಂತ ಮುಸ್ಲಿಮನೊಬ್ಬನ ಗೊಂದಲ, ಸಂಕೋಚ, ಅಸಹಾಯಕತೆ, ಬೆರಗು, ಕೋಪ, ದಿಗ್ಭ್ರಮೆ, ಕಹಿ, ಸಂಶಯ… ಇವೆಲ್ಲವನ್ನೂ ಸಹಜವಾಗಿ ಹಾದು ಹೋಗಿರುವ ವಿಕ್ಟರ್ ಬ್ಯಾನರ್ಜಿ; ಸಾವಿರಾರು ವರ್ಷಗಳಿಂದ ಗೋಡ್‌ಬೋಲೆಯ ಚರ್ಮದ ಭಾಗವಾಗಿರುವ ಹಿಪಾಕ್ರೆಸಿ; ಅದು ಹಿಪಾಕ್ರೆಸಿಯೆಂಬುದು ತನಗೇ ಅರಿವಿಲ್ಲದಿರಬಹುದಾದ ಹಿಪಾಕ್ರೆಸಿ; ಅದನ್ನು ಹಾಗೇ ಬಿಂಬಿಸಿರುವ ಅಲೆಕ್ ಗಿನ್ನಿಸ್; ಅಡೆಲಾ ಆಗಿರುವ ಜೂಡಿ ಡೇವಿಸ್, ಫೀಲ್ಡಿಂಗ್ ಪಾತ್ರಧಾರಿ ಜೇಮ್ಸ್ ಫಾಕ್ಸ್ ಇವರೆಲ್ಲ ನಾನು ಕಾದಂಬರಿಯಲ್ಲಿ ಕಂಡಂತೇ ಇದ್ದಾರೆ… ಇವರನ್ನೆಲ್ಲ ನಿಭಾಯಿಸಿರುವ ಡೇವಿಡ್ ಲೀನ್ ಹಾಗೂ ತಂಡ…ಎಲ್ಲ ಸೇರಿ ಸಿನಿಮಾ ಕೂಡ ಕಾದಂಬರಿಯಷ್ಟೇ ದೊಡ್ಡ ಕಲಾಕೃತಿಯಾಗಿದೆ.
ಸಿನಿಮಾ ಪಾತ್ರಗಳ ಮೂಲಕ ಮತ್ತೆ ಕಾದಂಬರಿಗೆ ಮರಳಿದೆ. ಪೂರ್ವ-ಪಶ್ಚಿಮಗಳನ್ನು ಅರ್ಥ ಮಾಡಿಕೊಳ್ಳಲು ಹೊರಟ ಕೆಲವು ಸುದೀರ್ಘ ಸಂವಾದಗಳು ಕೊಂಚ ಡೇಟೆಡ್ ಅನ್ನಿಸತೊಡಗಿದರೂ, ಫಾಸ್ಟರ್ ಕತೆಗಾರಿಕೆಯ ಮೋಹಕ ಗುಣ ಹಾಗೇ ಇದೆ. ಒಂದೇ ಸಾಲಿನಲ್ಲಿ ಪಾತ್ರದ ಒಳಗುಣ ಹಿಡಿದಿಡುವ ಅವನ ಶಕ್ತಿ; ಜನ ತುಂಬಿದ ಬಝಾರುಗಳು; ಮೊಹರಂ ಸಂಭ್ರಮ; ಮತೀಯ ಗೊಂದಲ ಇವನ್ನೆಲ್ಲ ಓದುವವರ ಚಿತ್ತದಲ್ಲಿ ಬಹುಕಾಲ ಉಳಿಸುವ ಬರವಣಿಗೆಯ ಶಕ್ತಿ…ಇವನ್ನೆಲ್ಲ ಸಿನಿಮಾದ ಚಿತ್ರಗಳಾಗಿಸಿರುವ ಸಿನಿಮಾ ತಂಡದ ಕಲಾನಿಷ್ಠ ಧ್ಯಾನ…
ಇಷ್ಟೆಲ್ಲ ಆದರೂ ಇವತ್ತು ‘ಎ ಪ್ಯಾಸೇಜ್ ಟು ಇಂಡಿಯಾ’ ಓದುತ್ತಿದ್ದರೆ, ವಸಾಹತುಕಾಲದ ಭಾರತದ ತಲ್ಲಣಗಳನ್ನು ವಸ್ತುನಿಷ್ಠವಾಗಿ ಅರಿಯಬಯಸುವ ಹೊರಗಿನ ಲೇಖಕನೊಬ್ಬ ಇದನ್ನೆಲ್ಲ ಬರೆಯುತ್ತಿದ್ದಾನೇನೋ ಅನ್ನಿಸುವುದು ಕೂಡ ಸಹಜ. ಆದರೂ ಇಲ್ಲಿರುವುದು ಟೂರಿಸ್ಟ್ ಮೆಂಟಾಲಿಟಿಯಲ್ಲ; ಯಾವುದೇ ಲೇಖಕ ಇನ್ನೊಂದು ಸಂಸ್ಕೃತಿಯನ್ನು ಕುರಿತು ಬರೆದಾಗ ನುಸುಳುವ ಸಹಜ ಸಮಸ್ಯೆ ಎನ್ನಿಸುತ್ತದೆ. ಇಲ್ಲೇ ಕನ್ನಡದಲ್ಲೇ ಒಂದು ಊರಿನ ಲೇಖಕ ಅದೇ ಊರಿನ ಇನ್ನೊಂದು ಕೇರಿಯ ಪಾತ್ರಗಳನ್ನು, ಆ ಪಾತ್ರಗಳ ಭಾಷೆಯ ಏರಿಳಿತಗಳನ್ನು ಕೂಡ ಸರಿಯಾಗಿ ಕೇಳಿಸಿಕೊಳ್ಳಲಾಗದೆ, ಊಹಿಸಿಕೊಂಡಂತೆ ಬರೆದ ಸಮಸ್ಯೆಗಳನ್ನು ಕಂಡಿದ್ದೇವೆ; ಇದು ಅನಂತಮೂರ್ತಿ, ಕಾರಂತರಂಥ ದೊಡ್ಡ ದೊಡ್ಡ ಲೇಖಕರ ಸಂದರ್ಭದಲ್ಲೇ ಕಾಣುತ್ತಿರುವಾಗ ದೂರದ ಇಂಗ್ಲೆಂಡಿನಿಂದ ಭಾರತಕ್ಕೆ ಬಂದು ಬರೆದ ಫಾಸ್ಟರನಲ್ಲಿ ಸಣ್ಣ ಪುಟ್ಟ ಕೊರತೆ ಕಂಡರೆ ಅಚ್ಚರಿಯೇನಲ್ಲ.
ಫಾಸ್ಟರ್ ೧೯೧೨-೧೩ರ ನಡುವೆ ಇಂಡಿಯಾಕ್ಕೆ ಬಂದು ಗೆಳೆಯ ಸೈಯದ್ ರಾಸ್ ಮಾಸೂದ್ ಜೊತೆ ಕಳೆದ. ಇಂಡಿಯಾದುದ್ದಕ್ಕೂ ಅಡ್ಡಾಡಿದ್ದ. ೧೯೨೧-೨೨ರ ನಡುವೆ ದೇವಾಸ್‌ನ ಮಹಾರಾಜನ ಪ್ರೈವೇಟ್ ಸೆಕ್ರೆಟರಿಯಾಗಿ ಕೆಲಸ ಮಾಡಿದ ಫಾಸ್ಟರ್ ವಸಾಹತೀಕರಣ ಕಾಲದ ಇಂಡಿಯಾದ ಸೂಕ್ಷ್ಮ ಸಾಂಸ್ಕೃತಿಕ ಸಂಘರ್ಷಗಳನ್ನು ಇನ್ನಷ್ಟು ಹತ್ತಿರದಿಂದ ಗ್ರಹಿಸಿದಂತಿದೆ. ಇಂಗ್ಲೆಂಡ್ ಹಾಗೂ ಇಂಡಿಯಾ; ಇಂಡಿಯಾದೊಳಗೇ ಹಲವು ಧರ್ಮ, ಜಾತಿಗಳ ಇಂಡಿಯಾಗಳು; ಮಾನವರ ಗುಹೆಗಳು, ಗುಹ್ಯಾಂತರಂಗಗಳು…ಇವನ್ನೆಲ್ಲ ಬೃಹತ್ ಬೀಸಿನಲ್ಲಿ ಹಿಡಿಯುತ್ತಾ, ೪೦೦ ಪುಟಗಳ ಕಾದಂಬರಿಯಲ್ಲಿ ನಾಗರಿಕತೆಗಳ ಕತೆ ಹೇಳಹೊರಟ ಮಹತ್ವಾಕಾಂಕ್ಷೆ ಸುಲಭದ್ದಲ್ಲ!
ಈ ಕಾದಂಬರಿ ಮತ್ತೆ ನನ್ನನ್ನು ಹಿಡಿದಿದ್ದು ಒಂದು ಆಕಸ್ಮಿಕ ಅದೃಷ್ಟ! ಇಂಥ ಅದೃಷ್ಟಗಳು ನಿತ್ಯವೂ ಎಲ್ಲರ ಪಾಲಿಗಿರಲಿ.
Comments
8 Comments
| Suresha B
ಹಾದಿಗಳು ತೆರೆದಿಟ್ಟ ಹೊಸಹಾದಿ ಹೆಜ್ಜೆಗಳ ನೆಟ್ಟ ಹೊಸದಾಗಿ ಸಿಕ್ಕ ಹಳೆ ಬಸದಿ ಮತ್ತೆ ಮತ್ತೆ ತುಳಿದಾಗ ಅಪರಿಚಿತ ಬೀದಿ ಸಿಗಬಹುದು ಲೋಕದ ಡೊಂಕುಗಳಿಗೆ ಔಷಧಿ... ನಡೆಯುತ್ತಿರಲಿ, ಕಾಮ್ರೇಡ್ ನಡಿಗೆಯೇ ನಾಡಿನ ನಾಡಿ ತಿಳಿವ 'ಗಾಂಧಿ' ಹಾದಿ
| Krishna Kumar
ಪಾಶ್ಚಿಮಾತ್ಯ ಭಾರತೀಯ ಸಂಸ್ಕೃತಿಯ ಅನಾವರಣ, ಕಾದಂಬರಿಯ ಮೂಲಕ ನೆಲ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವ ಕಾದಂಬರಿಕಾರನ ತುಡಿತ, A Passage to india ಕೃತಿಯ ಮೂಲಕ ಪಾತ್ರಗಳು ಮಾತನಾಡುವ ಪ್ರಕ್ರಿಯೆ, ನನಗೆ ಪಠ್ಯವಾಗಿದ್ದ ಈ ಕಾದಂಬರಿಯು ಮತ್ತೆ ನೆನಪಿಸಿತು. ಪಾಶ್ಚಿಮಾತ್ಯ ವಿಮರ್ಶೆಯ ನಿಮ್ಮ ಬರವಣಿಗೆ ಅದ್ಬುತ,
| ಸದಾನಂದ ಆರ್
ಹೌದು ಸರ್. ಈಗೀಗ ಓದುವ ಕ್ರಿಯೆಗಿಂತ ಅಂಕದ ಗಳಿಕೆಯ ಕ್ರಿಯಯೇ ಮುಖ್ಯ ಅನ್ನಿಸಿದೆ. ಓದಿನ ಲೋಕದಲ್ಲಿ ಕಳೆದು ಹೋಗುವುದೇ ಒಂದು ಚೆಂದ. ವಾಸ್ತವದ ಲೋಕಕ್ಕಿಂತ ಅದೊಂದು ಚೆಂದದ ಲೋಕ. ಫಾಸ್ಟರ್ ಹೇಳುವಂತೆ ಈ ಕಾದಂಬರಿಯೊಳಗೆ ಅದರದ್ದೇ ಆದ ಲೋಕವಿರುತ್ತದೆ: ಅದರದ್ದೇ ಆದ ನೀತಿ ರೀತಿ, ಪಾತ್ರಗಳು, ಸತ್ಯಗಳು, ಹೀಗೆ. ನನ್ನನ್ನು ಓದಿನ ಲೋಕಕ್ಕೆ ಹಚ್ಚಿದ್ದು ಆಕಾಶರಾಯ ಮತ್ತು ಗಾಳಿರಾಯರು - ಅವರ ಗೂಢಾಚಾರ ಕಥೆಗಳು ಗಡಿಯಾರದಲ್ಲಿ ಗಂಟೆಗಳು ಖಾಲಿಯಾಗಿದ್ದರೂ, ಪುಸ್ತಕ ಓದಿ ಮುಚ್ಚಿದ ಮೇಲೆ ಐದಾರು ನಿಮಿಷಗಳಷ್ಟೇ ಮುಗಿದೆವೆ ಅನ್ನುವ ಭಾವನೆ ತರಿಸುತ್ತಿದ್ದವು. ಇವರೆಲ್ಲರು ಹಿಡಿಸಿದ ಓದಿನ ಹುಚ್ಚು ಮುಂದೆ ಕುವೆಂಪು, ಹಾಗೆ ಫಾಸ್ಟರ್, ಹೆಮ್ಮಿಂಗ್‌ವೇ ಅವರ ಬಳಿಗೆ ಹಾದಿ ತೋರಿತು. ನಡುವೆ ಜೇಮ್ಸ್ ಹಾಡ್ಲಿ ಚೇಸ್, ಸ್ಟೀಫನ್ ಕಿಂಗ್, ರಾಬರ್ಟ್ ಕುಕ್ ತರಹದ ಕಾದಂಬರಿಕಾರರು ಪಾನಿಪುರಿ ತರಹ ಒಂದಿಷ್ಟು ರುಚಿ ನೀಡಿ ಹೋಗುತ್ತಿದ್ದು ಸತ್ಯವೇ. ಬಹುಶಃ ಈಗಿನ ಸೆಮಿಸ್ಟರ್‌ನ ವ್ಯಾಪ್ತಿಯಲ್ಲಿ ಕಾದಂಬರಿಯನ್ನು ಓದಿಸುವುದು ಕಷ್ಟ ಎಂದು ನಮ್ಮ ಸಿಲಿಬಸ್ ಪಿತಾಮಹರಿಗೆ ಎನಿಸಿದೆಯೋ ಏನೋ ಗೊತ್ತಿಲ್ಲ. ಆದರೆ ಕಾಲೇಜು ಆರಂಭವಾದೊಡನೆ, ಕಾಲೇಜಿನ ಸಮೀಪದಲ್ಲಿರುವ ಝೆರಾಕ್ಸ್ ಅಂಗಡಿಯ ಬಳಿ ವಿದ್ಯಾರ್ಥಿಗಳ ದಂಡು ಪ್ರಿಂಟೆಡ್ ಕಾಪಿಗಳನ್ನು ಪಡೆಯಲು ನೆರೆಯುವುದಂತೂ ಸತ್ಯ. ಓದಿಗಾಗಿ ಓದು ಎನ್ನುವವನು ಹುಚ್ಚ ಎಂದಾಗಿದೆ. ನನ್ನ ಪರಿಚಯದ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕರೊಬ್ಬರು - ಈ ಹಳಗನ್ನಡದ ಪಠ್ಯಗಳು ಈಗಿನ ಮಕ್ಕಳಿಗೆ ಅಗತ್ಯ ಇಲ್ಲಾ. ಸುಮ್ಮನೆ ಕೆಲಸಕ್ಕೆ ಬಾರದ ವಿಚಾರ. ಅದರ ಬದಲು ಸ್ಪರ್ಧಾ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವ ವಿಚಾರ ಕಲಿಸುವುದು ಒಳಿತು ಎನ್ನುವ ಅಭಿಪ್ರಾಯ ಅರುಹಿದಾಗ - ಏನು ಹೇಳಬೇಕೆಂದು ತಿಳಿಯದೆ ಸುಮ್ಮನೆ ಹಲ್ಲು ಕಿರಿದು ಸುಮ್ಮನಾಗುವ ಸರದಿ ನನ್ನದಾಗಿತ್ತು. ಬಹುಶಃ ಇಂತಹವರು ಕಾದಂಬರಿ ಓದುವುದು ಸಮಯ ನಷ್ಟ ಮಾಡಿಕೊಳ್ಳುವ ಕೆಲಸ - ಅದರ ಬದಲು ಅದರ ಕುರಿತು ಇರುವ ನೋಟ್ಸ್ ಓದಿರಿ ಎನ್ನಬಹುದೇನೋ. ಪುಟ್ಟ ಲೇಖನದಲ್ಲಿ ಫಾಸ್ಟರ್‌ನ ಕಥಾಲೋಕಕ್ಕೆ ನನ್ನನ್ನು ಮತ್ತೆ ಕರೆದೊಯ್ದ ನಿಮಗೆ ವಂದನೆಗಳು.
| Anil Gunnapur
ಧನ್ಯವಾದಗಳು ಸರ್
| Dr. Karigowda Bichanahally
ನನಗೆ ಎಂ ಎ ಯಲ್ಲಿ passage to India... text ಆಗಿತ್ತು.ಅದರ ಮೂರು ಭಾಗಗಳು Caves, temple, mosque ಈ ವಿಭಾಗ ಕ್ರಮವೇ ನನಗೆ ಅದನ್ನು ಓದಲು ಕುತೂಹಲ ಹಾಗೂ ಆಸಕ್ತಿಯನ್ನು ಹುಟ್ಟಿಸಿತ್ತು. ಯಾರೋ ಅದನ್ನು ಭಾರತದ ಯಾತ್ರೆ ಅಂತ ಅನುವಾದ ಮಾಡಿದ್ದು ತುಸುನೆನಪು.ಆದರೆ ಅದರ ಒಳ್ಳೆ ಅನುವಾದದ ಅವಶ್ಯಕತೆ ಕನ್ನಡಕ್ಕೆ ಇದೆ. ಅದನ್ನು ನೀವು ನೋಡಿರುವ ದೃಷ್ಟಿ ಕೂಡ ಇಂಟ್ರೆಸ್ಟಿಂಗ್.
| Nataraj Huliyar Replies
Yes Professor, If you take up the translation, it will be as good addition to Kannada
| ಗುರು ಜಗಳೂರು
ಸರ್ ಈ ಲೇಖನ ಓದಿ ಸಿನಿಮಾ(ಯೂಟ್ಯೂಬ್ ನಲ್ಲಿದೆ) ನೊಡಬೇಕಿನಿಸುತ್ತದೆ.ಸತ್ತಜಿತ್ ರೇ ಸಿನಿಮಾ ನಾವು ಯುವಕರಾಗಿದ್ದಾಗ ಅರ್ಥವಾಗುತ್ತಿರಲಿಲ್ಲ.ಇತ್ತೀಚಿಗೆ ನೋಡಿದಾಗ ಬಹಳ ದಿನ ಕಾಡುವ ಸಿನಿಮಾ ಅನಿಸಿದೆ. 80 ರಲ್ಲಿ ಉತ್ತರ ಪ್ರದೇಶದಲ್ಲಿ ದೇಶದಲ್ಲೇ ಆದ ಸುಧಿರ್ಘ ಆದಾಯ ತೆರಿಗೆ ದಾಳಿಯು ಒಂದು ಸಿನಿಮಾಗೆ ಸ್ಪೂರ್ತಿಯಾಯಿತು .ಅದೇ ಕೋವಿಡ್ ಗಿಂತ ಮುಂಚೆ ಬಂದ ಅಜಯ್ ದೇವಗಣ್ ನಟಿಸಿರುವ "ರೇಡ್". ಎರಡು ತಾಸಿನ ಎಷ್ಟು ಒಳ್ಲೆಯ ಸಿನಿಮಾ. ಕನ್ನಡದ ಇತ್ತೀಚಿನ ನಿರ್ದೇಶಕರು ಸಿನಿಮಾ ಕಲೆಯನ್ನೇ ಮರೆತಿದ್ದಾರೆ ಎನಿಸುತ್ತದೆ.
| ಡಾ. ನಿರಂಜನ ಮೂರ್ತಿ ಬಿ ಎಂ
'ಹಾದಿ ಕರೆದೊಯ್ಯುವುದು ಹಾದಿಗೆ, ಎಂಬೀ ಶೀರ್ಷಿಕೆಯ ಲೇಖನ ಓದುಗನನ್ನು ಮತ್ತೊಂದು ಹಾದಿಗೆ, ಅಲ್ಲಿಂದ ಮಗದೊಂದು ಹಾದಿಗೆ ಕರೆದೊಯ್ಯಿತು. ಲೇಖಕರ ಪುಸ್ತಕ ನೆಗೆತದ ಗುಣದೊಂದಿಗೇ ರಿಸರ್ಚ್ ಆಧಾರಿತ ಬರವಣಿಗೆಯ ಅಭ್ಯಾಸವು ಅತ್ಯುತ್ತಮವೆನ್ನುವುದು ಸಂಶಯಾತೀತ. ಕಾದಂಬರಿಯ ಓದಿನಲ್ಲೇ ಬದುಕುವ ಲೇಖಕರ ಜೀವನಾನುಭವ ಅನುಕರಣೀಯ. ಕಾದಂಬರಿಯ ಓದು ಬದುಕಿನ ದರ್ಶನವಾಗುವುದು ದಿಟವಲ್ಲದೆ ಸಟೆಯೆ? ಅತ್ಯುತ್ತಮ ವಿಚಾರಗಳನ್ನೊಳಗೊಂಡ ಈ ಲೇಖನಕ್ಕಾಗಿ ಆಭಾರಿ.
Add Comment