ಪ್ರಗತಿಪರ ಚಿಂತಕರಾದ ನಟರಾಜ್ ಹುಳಿಯಾರ್ ಅವರ ‘ಶಾಂತವೇರಿ ಗೋಪಾಲಗೌಡ’ ನಮ್ಮ ರಾಜಕೀಯ ವ್ಯವಸ್ಥೆಯ ಬಗ್ಗೆಯೇ ಮರು ಚಿಂತನೆ ಮಾಡಲು ನಮ್ಮನ್ನು ಒತ್ತಾಯಿಸುತ್ತದೆ. ಇದು ನಾಡಿನ ಬಗ್ಗೆ ಆಸಕ್ತಿಯಿರಯುವ ಸಂವೇದನಾಶೀಲರೆಲ್ಲರೂ ಅಗತ್ಯವಾಗಿ ಓದಬೇಕಾದ ಪುಸ್ತಕ.
-ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ
ಕರ್ನಾಟಕದಲ್ಲಿ ಸಮಾಜವಾದಿ ಚಿಂತನೆ, ಸಮಾಜವಾದಿ ರಾಜಕಾರಣವನ್ನು ರೂಪಿಸಿದ ಅಪೂರ್ವ ನಾಯಕ ಶಾಂತವೇರಿ ಗೋಪಾಲಗೌಡರ ಸಮಗ್ರ ಜೀವನ ಚರಿತ್ರೆ ಇದು. ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಬಂಧನಕ್ಕೊಳಗಾಗಿದ್ದ ಬಾಲಕ ಗೋಪಾಲಗೌಡ ತಾರುಣ್ಯದಲ್ಲಿ ಸಮಾಜವಾದಿ ಪಕ್ಷ ಸೇರಿ ಕಾಗೋಡು ಗೇಣಿದಾರರ ಭೂ ಹೋರಾಟದಲ್ಲಿ ಭಾಗಿಯಾದರು. ಭೂಹಂಚಿಕೆ, ಸಮಾನತೆಯ ಪ್ರಶ್ನೆಗಳು ಅವರ ಚಿಂತನೆ, ಹೋರಾಟಗಳ ಭಾಗವಾಗಿದ್ದವು.
ತಮ್ಮ ಇಪ್ಪತ್ತೊಂಬತ್ತನೆಯ ವಯಸ್ಸಿನಲ್ಲಿ ಸಮಾಜವಾದಿ ಪಕ್ಷದಿಂದ ಮೈಸೂರು ರಾಜ್ಯದ ಚುನಾವಣಾ ಕಣಕ್ಕಿಳಿದ ಗೋಪಾಲಗೌಡರು ಮೂರು ಅವಧಿಗೆ ಶಾಸಕರಾಗಿ ಆಯ್ಕೆಯಾದರು. ಎರಡು ದಶಕಗಳ ರಾಜಕಾರಣದಲ್ಲಿ ಮತದಾರರಿಂದಲೇ ಚುನಾವಣಾ ರಾಜಕಾರಣವನ್ನು ರೂಪಿಸಿ, ಅಧಿಕಾರಸ್ಥರ ಕಣ್ಗಾವಲಾಗಿ, ಜನತೆಯ ನಾಯಕರಾಗಿ ಬೆಳೆದರು. ರಾಮಮನೋಹರ ಲೋಹಿಯಾರ ಸಮಾಜವಾದಿ ಮಾರ್ಗದಲ್ಲಿ ಹೊರಟ ಗೋಪಾಲಗೌಡರು ಚಳುವಳಿ, ಕನ್ನಡಪರ ಹೋರಾಟಗಳಲ್ಲಿ ಸಕ್ರಿಯವಾಗಿದ್ದರು; ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕಗಳಲ್ಲಿ ಅಪಾರ ಸಂಗಾತಿಗಳನ್ನು ಸೃಷ್ಟಿಸಿಕೊಂಡಿದ್ದರು. ಗೋಪಾಲಗೌಡರು ಸ್ವಂತದ ಲಾಭಗಳ ಹಂಗು ತೊರೆದ ಪ್ರಬುದ್ಧ ರಾಜಕಾರಣದ ಮಾದರಿಯನ್ನು ರೂಪಿಸಲೆತ್ನಿಸಿದರು. ಕನ್ನಡ ಸಾಹಿತ್ಯ, ಸಂಸ್ಕೃತಿಗಳಿಂದ ಪ್ರೇರಣೆ ಪಡೆದ ನಾಯಕನೊಬ್ಬ ತನ್ನ ನಡೆ, ನುಡಿಗಳ ಮೂಲಕವೇ ಸೃಷ್ಟಿಸುವ ಶುದ್ಧ, ಜವಾಬ್ದಾರಿಯುತ ರಾಜಕಾರಣದ ಮಾದರಿಯನ್ನು ಗೋಪಾಲಗೌಡರು ತೋರಿಸಿದರು.