ಇಂತಿ ನಮಸ್ಕಾರಗಳು



Book 2

Publisher: Pallava Prakashana

Description:

ಇಂತಿ ನಮಸ್ಕಾರಗಳು ಲಂಕೇಶ್ ಮತ್ತು ಡಿ. ಆರ್. ನಾಗರಾಜ್ ಕುರಿತು ನಟರಾಜ್ ಹುಳಿಯಾರ್ ಬರೆದ ಸೃಜನಶೀಲ ಕಥಾನಕ. ಲಂಕೇಶ್ ಮತ್ತು ಡಿ. ಆರ್. ನಾಗರಾಜ್ ಕನ್ನಡ ಸಾಹಿತ್ಯ ಕಂಡ ಎರಡು ವಿಸ್ಮಯಗಳು. ಈ ಎರಡೂ ಲೇಖಕರು ಒಬ್ಬರ ಜೊತೆ ಇನ್ನೊಬ್ಬರು ಇದ್ದೂ ಇಲ್ಲದಂತೆ ಬದುಕಿದರು. ಪರಸ್ಪರ ವಿಮರ್ಶೆಗೊಳಪಡಿಸಿಕೊಳ್ಳುತ್ತಾ ಸಮಕಾಲೀನರಾಗಿ ಬದುಕಿದವರು. ನಟರಾಜ್ ಹುಳಿಯಾರ್ ಈ ಎರಡು ದೈತ್ಯ ಪ್ರತಿಭೆಗಳ ಜೊತೆಗೆ ತನ್ನತನವನ್ನು ಉಳಿಸಿಕೊಳ್ಳಲು ಏಗಾಡಿದವರು. ಈ ಎರಡೂ ಮೇಷ್ಟ್ರುಗಳು ತಮ್ಮನ್ನು ಆಹುತಿ ತೆಗೆದುಕೊಳ್ಳದ ಹಾಗೆ ಕೊನೆಯವರೆಗೂ ಜಾಗರೂಕತೆಯಿಂದ ತನ್ನ ಸೃಜನಶೀಲ ಚಟುವಟಿಕೆಗಳಿಗೆ ಪೂರಕವಾಗಿ ಆ ಬೆಂಕಿಯ ಕಾವನ್ನು ತಮ್ಮದಾಗಿಸುತ್ತಾ ಬಂದವರು.  
        ಈ ಕೃತಿಯಲ್ಲಿ 11 ಅಧ್ಯಾಯಗಳನ್ನು ಲಂಕೇಶರಿಗೂ, 13 ಅಧ್ಯಾಯಗಳನ್ನು ಡಿ. ಆರ್. ನಾಗರಾಜರಿಗೂ ಮೀಸಲಿಟ್ಟಿದ್ದಾರೆ ಹುಳಿಯಾರ್. ಲಂಕೇಶರ ಕೃತಿಗಳನ್ನು ಪರಿಚಯಿಸುತ್ತಲೇ ಅದರೊಳಗಿನ ಪಾತ್ರಗಳ ಮೂಲಕ ಲಂಕೇಶರ ವ್ಯಕ್ತಿತ್ವವನ್ನು ಕಟ್ಟಿಕೊಡುವ ಪ್ರಯತ್ನವನ್ನು ಮಾಡಿದ್ದಾರೆ.  ಎಲ್ಲೂ ಭಾವನಾತ್ಮಕವಾಗಿ ಕೊಚ್ಚಿ ಹೋಗದ, ಅಥವಾ ತನ್ನನ್ನು ಉಳಿಸಿಕೊಳ್ಳುವ ಭರದಲ್ಲಿ ಬರಹಗಳನ್ನು ಬರೇ ವರದಿಯಾಗಿಯೂ ಉಳಿಸಿಕೊಳ್ಳದ ಈ ಹೊಸ ಕಥನ   ನಟರಾಜ್ ಹೇಳುವಂತೆ ‘ವಿವಿಧ ಪ್ರಕಾರಗಳು ಬೆರೆತ ಆಧುನಿಕೋತ್ತರ ಸಾಂಸ್ಕೃತಿಕ ಕಾದಂಬರಿ’. ಲಂಕೇಶ್ ಮತ್ತು ನಾಗರಾಜ್ ಅವರ ಕುರಿತಂತೆ ಹೊಸ ಓದಿಗೆ ನಿಮ್ಮನ್ನು ಈ ಕೃತಿ ಎಳೆಯುತ್ತದೆ. ಅದುವೇ ಈ ಕೃತಿಯ ಹೆಚ್ಚುಗಾರಿಕೆ. ಪಲ್ಲವ ಪ್ರಕಾಶನ ಹೊರತಂದಿರುವ ಈ ಪುಸ್ತಕದ ಮುಖಬೆಲೆ 180 ರೂ.  

-ಬಿ.ಎಂ. ಬಶೀರ್


BUY THIS BOOK